ಅರಣ್ಯ ಎಂಬುದು ಕೇವಲ ಹತ್ತಾರು ಗಿಡಮರಗಳಲ್ಲ. ಅರಣ್ಯ ಎಂಬುದು ನಮ್ಮ ಆತ್ಮವಿದ್ದಂತೆ ಎಂದು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಎಂ.ಎನ್. ವೆಂಕಟಾಚಲಯ್ಯ ರವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಅರಣ್ಯ ಭವನದಲ್ಲಿ ನಿವೃತ್ತ ಐಎಫ್‍ಎಸ್ ಅಧಿಕಾರಿ ಎ.ಸಿ. ಲಕ್ಷ್ಮಣ ಅವರು ಬರೆದಿರುವ ‘Challenges of a tropical Forester for Sustainable Development” ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಕಾಡು ನಾಡಿನ ಸಂಪತ್ತು. ಕಾಡು ಈ ಭೂಮಿ ಹಾಗೂ ಮನುಕುಲದ ಆತ್ಮವಿದ್ದಂತೆ. ವೈಜ್ಞಾನಿಕ ಯುಗವು ಎಲ್ಲವೂ ಬದಲಿಸಿಬಿಡುತ್ತೆ, ಆದರೆ, ಈ ಅರಣ್ಯ ಸಂಪತ್ತು ನಮ್ಮ ದೇವತೆ ಇದ್ದಂತೆ, ಇದು ನಮಗೆ ದಿವ್ಯ ಚೇತನವಿದ್ದಂತೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು) ಶ್ರೀ ಪುನಾಟಿ ಶ್ರೀಧರ್ ಅವರು ಲೇಖಕರ ಬಗ್ಗೆ ಮಾತನಾಡಿದರು. ಚಿಕ್ಕಮಗಳೂರಿನಲ್ಲಿ ತಮಗೆ ಗುರುಗಳಾಗಿದ್ದ ಎ.ಸಿ. ಲಕ್ಷ್ಮಣ ಅವರ ಮಾರ್ಗದರ್ಶನವನ್ನು ಕೊಂಡಾಡುವ ಮೂಲಕ ಗುರುಶಿಷ್ಯರ ಸಂಬಂಧವನ್ನು ಬಿಚ್ಚಿಟ್ಟರು. ಲಕ್ಷ್ಮಣ್ ಅವರು ನನಗೆ ಮೊದಲ ಗುರುಗಳು. ಪರಿಶ್ರಮ, ವೃತ್ತಿಪರತೆಗೆ ಮತ್ತೊಂದು ಹೆಸರು ಇವರು. ಪ್ರತಿಯೊಂದು ಹಂತದಲ್ಲೂ ನನಗೆ ಇವರು ಹೇಳಿ ಕೆಲಸ ಮಾಡಿಸುತ್ತಿದ್ದರು. ಹೊಸ ಆಲೋಚನೆ, ಹೊಸ ಸಂಶೋಧನೆಗೆ ಇವರು ಅಣಿಯಾಗುತ್ತಿದ್ದರು ಎಂದು ಪುನಾಟಿ ಶ್ರೀಧರ್ ಅವರು ಕೊಂಡಾಡಿದರು. ಲಕ್ಷ್ಮಣ ಅವರು ಬಿದಿರು ಬೆಳೆಸೋಕೆ ಉತ್ಸುಕರಾಗಿದ್ದರು. ಅವರ ಆಸೆಯಂತೆ ನಾವೀಗ ಶೇ.50ರಿಂದ 60ರಷ್ಟು ನೆಟ್ಟಿದ್ದೇವೆ. ಆದ್ರೆ, ಅವರ ನಿರೀಕ್ಷೆಗೆ ತಕ್ಕಂತೆ ಮಾಡಲಾಗಿಲ್ಲ, ಪ್ರಯತ್ನ ಪಡುತ್ತಿದ್ದೇವೆ. ಇನ್ನು ಹೊಗೆಸೊಪ್ಪು ಬದಲಿಗೆ ಹೆಬ್ಬೇವು ಬೆಳೆಯೋಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದೀಗ ಸಕ್ಸಸ್ ಆಗುತ್ತಿದೆ ಎಂದು ಹೇಳಿದರು. ನಂತರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ ವಿಭಾಗ) ಸಂಜಯ್ ಮೋಹನ್ ರವರೂ ಕೂಡ ತಮ್ಮ ಮಾರ್ಗದರ್ಶಕರಾದ ಲಕ್ಷ್ಮಣ ಅವರ ಕಾರ್ಯಚಟುವಟಿಕೆಯನ್ನು ಮೆಚ್ಚಿಕೊಂಡರು. ಹಿರಿಯೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಲಕ್ಷ್ಮಣ ಅವರು ಬಾಸ್ ಆಗಿದ್ದರು. ಅವರ ಪ್ರತಿಯೊಂದು ಮಾತು ಕೂಡ ನನಗೆ ಶ್ರೀರಕ್ಷೆಯಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಅಂತಿಮವಾಗಿ ಲೇಖಕರೂ ಆಗಿರುವ ನಿವೃತ್ತ ಐಎಫ್ ಎಸ್ ಅಧಿಕಾರಿ ಎ.ಸಿ. ಲಕ್ಷ್ಮಣ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ನನ್ನ ವೃತ್ತಿಯ ಆರಂಭದಲ್ಲಿ ನಾನು ಮರ ಕಡಿದಷ್ಟು ಯಾರೂ ಕಡಿಯಲಿಲ್ಲ. ಶರಾವತಿ, ಕಾಳಿ ಹಾಗೂ ಹಾರಂಗಿಯಲ್ಲಿ ಮರಗಳನ್ನು ಕತ್ತರಿಸಿದ ಬಳಿಕ ನನಗೆ ಜ್ಞಾನೋದಯವಾಯಿತು. ನಂತರ 1970ರಿಂದ ಪುಸ್ತಕ ಬರೆಯೋಕೆ ಶುರು ಮಾಡಿ ಮಾಡಿದ ತಪ್ಪನ್ನು ಈಗ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
Aranya Bhavan, Malleshwaram.
aranya.gov.in